Friday, November 22, 2013

About shree Akhila Havyaka Mahasabha (R) Bangalore ..... ( part 3 )

About shree Akhila Havyaka Mahasabha (R) Bangalore ..... ( part 3 )


ಒಬ್ಬರು ಹಿತೈಷಿ ಮಿತ್ರರು ಮಾತನಾಡುತ್ತಾ ಈ ರೀತಿ ವಿವಿಧ ಮಾಹಿತಿ ಮತ್ತು ವಿಚಾರಗಳನ್ನು ಹೊಂದಿರುವ ನೀವು ನ್ಯಾಯಾಲಯದಲ್ಲಿ ದಾವೆ ಹೂಡಬಹುದಲ್ಲವೇ ?, ಎಂದು ಪ್ರಶ್ನಿಸಿದರು . ಅವರ ಪ್ರಶ್ನೆಗೆ ನಾನು ನೀಡಿದ ಸಮಜಾಯಿಷಿಯ ಸಾರ ಹೀಗಿದೆ. 



೧. ಯಾವುದೇ ಸಂಘಟನೆ , ಸಾರ್ವಜನಿಕ ಸಂಸ್ಥೆಗಳ ಪ್ರಮುಖ ಸ್ಥಾನಗಳಲ್ಲಿ ಕುಳಿತವರು ತಮ್ಮ ಕಾರ್ಯಗಳನ್ನು, ಸರಿಯೋ ತಪ್ಪೋ ಆ ವಿಚಾರ ಬೇರೆ , ಸಮರ್ಥಿಸಿಕೊಳ್ಳಲು ಸಂಸ್ಥೆಯ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ವಿಧಿ ವಿಧಾನಗಳ ಪ್ರಕಾರ ಅವರಿಗೆ ಬೇಕಿರುವದು ಆಡಳಿತ ಮಂಡಳಿಯ ಸದಸ್ಯರುಗಳ ಸಹಯೋಗವಷ್ಟೇ. ಸರಿಯಲ್ಲದ ಕೆಲಸಗಳಿಗೆ, ವಿಧಾನಗಳಿಗೆ ಸಹಯೋಗನೀಡಿದವರು ತಮ್ಮ ನಿರ್ಣಯಗಳ ಸಮರ್ಥನೆಗೆ ಸಂಸ್ಥೆಯ ಹಣವನ್ನು ನೀರಿನಂತೆ ಖರ್ಚು ಮಾಡುವದು ಎಲ್ಲೆಡೆ ಕಂಡುಬರುವ ಸಹಜ ಬೆಳವಣಿಗೆಗಳು. ಸಮಾಜ ಸೇವಾ ಸಂಸ್ಥೆಗಳಿಗೆ, ಅದರಲ್ಲೂ ನಮ್ಮ ಶ್ರೀ ಅಖಿಲ ಹವ್ಯಕ ಮಹಾಸಭೆಗೆ ಬರುವ ಹಣ , ಸಮಾಜ ಬಂಧುಗಳು ಬಹಳ ವರ್ಷ ಪರಿಶ್ರಮ ಮಾಡಿ ತಾವು ಕೂಡಿಟ್ಟ ಹಣ . ಸಮಾಜ ಮುಖಿ ಚಟುವಟಿಕೆಗಳು ವೃದ್ಧಿ ಕಾಣಲಿ , ಹತ್ತಾರು ಅಸಹಾಯಕರಿಗೆ ಸಹಾಯವಾಗಲಿ, ತಾವು ಜೀವನದಲ್ಲಿ ಪರಿತಪಿಸಿದ ವಿವಿಧ ಹಂತಗಳು ನಮ್ಮ ಸಮಾಜದ ಯುವ ಜನಾಂಗಗಳಿಗೆ ಬಾರದಿರಲಿ ಎಂಬ ವಿವಿಧ ಉದಾತ್ತ ಧ್ಯೇಯೋದ್ದೇಶಗಳಿಗೆ ನೀಡುವ ಹಣ ಕಾರ್ಯಕಾರಿ ಮಂಡಳಿಯಿಂದ ಯಾವುದೋ ವ್ಯರ್ಥ ಖರ್ಚುಗಳಿಗೆ ವ್ಯಯವಾಗಬಾರದಲ್ಲ. ಯಾವುದೇ ಸಾಮಾನ್ಯ ಸದಸ್ಯನೊಬ್ಬ ನಿರ್ಣಯಗಳನ್ನು ಪ್ರಶ್ನಿಸಿ ಕೋರ್ಟು, ಕಛೇರಿಗಳ ಕದ ತಟ್ಟಿದರೆ ಆಡಳಿತ ನಡೆಸುವವರಿಗೆ ಇನ್ನೊಂದು ಹಬ್ಬ. ಕಚೇರಿಯ ಖರ್ಚು, ಟೇಬಲ್ ಕೆಳಗಿನ ಖರ್ಚು, ವಕೀಲರ ಖರ್ಚು, ಮಧ್ಯವರ್ತಿಗಳ ಖರ್ಚು ಹೀಗೆ ಪಟ್ಟಿ ಬೆಳೆಯುತ್ತ ಹೋಗುವದು ತಾನೇ? ಈ ಎಲ್ಲ ಖರ್ಚು ಗಳ ಜೊತೆ ತಮ್ಮ ಜೇಬಿಗಿಷ್ಟು ಸೇರಿಸಿ ವೋಚರ್ ಬರೆದು ತಮ್ಮ ಸಾಲಿನಲ್ಲಿ ಸೇರುವ ಸಂಖ್ಯಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ನಾವೇ ಅವಕಾಶ ನಿರ್ಮಿಸಿದಂತಾಗುವದು ತಾನೇ? ಸದಸ್ಯನೊಬ್ಬ ಐದು ಸಾವಿರ ರೂಪಾಯಿ ಖರ್ಚು ಮಾಡಿ ಹೈಕೋರ್ಟ್ ರಿಟ್ ಹಾಕಿದರೆ , ಆಡಳಿತ ಮಂಡಳಿಯವರು ರಾಮ್ ಜೇಟ್ ಮಲಾನಿಯಂತಹ ವಕೀಲರಿಗೆ ಐವತ್ತು ಸಾವಿರ ರೂಪಾಯಿ ಸಂಸ್ಥೆಯ ಹಣ ಖರ್ಚು ಮಾಡಿ , ಕೇಸ್ ಗೆಲ್ಲುವ ಪ್ರಯತ್ನ ಮಾಡುವರು. ಗೊತ್ತಲ್ಲ ಗಾದೆ, ಗೆದ್ದವ ಸೋತ - ಸೋತವ ಸತ್ತ . ಕೊನೆಯಲ್ಲಿ ಒಟ್ಟಾರೆ ಫಲಿತಾಂಶ - ಬೆವರು ಸುರಿಸಿ, ಕೂಡಿಟ್ಟು ದಾನ ನೀಡಿದ ಸಮಾಜ ಬಾಂಧವರ ಹಣ - ಹುಚ್ಚನ ಮದುವೆಯಲಿ ಉಂಡವನೇ ಜಾಣ . 


೨. ಅದಕ್ಕೇ ಎಲ್ಲ ಸಂಘಟನೆಗಳ ಯಶಸ್ಸಿನ ಸಾರವೆಂದರೆ ಸಾಮಾನ್ಯ ಸದಸ್ಯ ಸದಾ ಜಾಗ್ರತವಾಗಿರಬೇಕು. ಯಾವುದೇ ನಿರ್ಣಯವನ್ನು ಹತ್ತಾರು ಕೋನಗಳಿಂದ ವಿಮರ್ಶಿಸುವ ಜಿಜ್ಞಾಸೆ ಹೊಂದಿರಬೇಕು. ಲಕ್ಷ ಕೊಟ್ಟವರಿರಲಿ, ಸಾವಿರ ಕೊಟ್ಟವರಿರಲಿ ಹಣದ ಬೆಲೆ ಗಳಿಸಿದವನಿಗೆ, ಹಣ ಗಳಿಸಲು ಪ್ರಯತ್ನಿಸುವವನಿಗೆ ಮಾತ್ರ ಅರಿವಿರುತ್ತದೆ. ಹಣವುಳ್ಳವರೆಲ್ಲ ದಾನಿಗಳಾಗುವದಿಲ್ಲ, ದಾನಿಗಳ ಹಣ ವ್ಯರ್ಥವಾದರೆ , ಹಣವುಳ್ಳವರು ದಾನಿಗಳಾಗಲು ಹಿಂಜರಿಕೆ ತೋರುತ್ತಾರೆ. ಸಾಮಾನ್ಯ ಸದಸ್ಯ ಜಿಜ್ನಾಸುವಾದರೆ, ಆಡಳಿತ ನಡೆಸುವವರು ಸದಾ ಜಾಗ್ರತರಾಗಿರುತ್ತಾರೆ. ಸಾಮಾನ್ಯ ಸದಸ್ಯ ಸೋತರೆ, ಆಡಳಿತ ನಡೆಸುವವರಿಗೆ ಚುನಾವಣೆ ಬಂದೊದಗಿದಾಗ ವ್ಯೂಹ ರಚಿಸುವದು, ಸಾಮಾನ್ಯ ಸದಸ್ಯನ ಸಮ್ಮೋಹಗೊಳಿಸುವದಷ್ಟೇ ಅವಶ್ಯಕವಾಗಿ , ಸಮಾಜ ಮುಖಿ ಕಾರ್ಯ ತತ್ಪರತೆಗಳಿಗೆ ಜಾಡ್ಯ ಹಿಡಿಯುತ್ತದೆ. ಅದರಲ್ಲೂ ನಮ್ಮ ಶ್ರೀ ಅಖಿಲ ಹವ್ಯಕ ಮಹಸಭೆಯಂತಹ ಸಂಸ್ತೆಯಲ್ಲಿ ಹತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ವೆಚ್ಚ ಮಾಡಿದ್ದರ ವರದಿ ಪ್ರತಿ ತಿಂಗಳ ಪತ್ರಿಕೆಯಲ್ಲಿ ನೀಡುವ ವ್ಯವಸ್ಥೆ ಜಾರಿಗೊಳ್ಳುವಂತೆ ಸಾಮಾನ್ಯ ಸದಸ್ಯರೆಲ್ಲ ಒತ್ತಡ ತರಬೇಕಾಗಿರುವದು ಪ್ರಥಮ ಅವಶ್ಯಕತೆ. ಪತ್ರಿಕೆಯ ಒಂದು ಪುಟ ಪ್ರತಿ ತಿಂಗಳು , ತಿಂಗಳ ಆಯ ವ್ಯಯದ ವರದಿಗೆ ಮೀಸಲಿಟ್ಟರೆ , ಸಮಾಜ ಬಾಂಧವರಲ್ಲಿ ಮಹಾಸಭೆಯ ಬಗೆಗೆ ಹೆಚ್ಚಿನ ಅಭಿಮಾನ ಉಂಟಾಗಿ ಹತ್ತಾರು ಪ್ರಯೋಜನಕಾರೀ ಕಾರ್ಯಗಳಿಗೆ ಧನ ಸಂಗ್ರಹಣೆಗೂ ಅನುಕೂಲ. 


ಹರಿಹರ . ಎಸ್ . ಭಟ್ , ಬೆಂಗಳೂರು . 
ಶ್ರೀ ಅಖಿಲ ಹವ್ಯಕ ಮಹಾಸಭಾ , ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

November 23 , 2013.

ಈ ವಿಚಾರಗಳನ್ನು ಪ್ರತಿಯೊಬ್ಬ ಹವ್ಯಕ ರಿಗೂ ತಲುಪಿಸುವ ವ್ಯವಸ್ಥೆಗೆ ನೀವು ಸಹಾಯ ಮಾಡಿ. ನಿಮ್ಮ ಮತ್ತು ನಿಮ್ಮ ಮಿತ್ರರ, ಸಂಬಂಧಿಗಳ e-mail id ಯನ್ನು havyakavaarte@gmail.com ಎಂಬ id ಗೆ e-mail ಮಾಡಿ . ನಮ್ಮ ಸಂಪರ್ಕದಲ್ಲಿರಿ. 

ಈ ರೀತಿ e-mail ವ್ಯವಸ್ಥೆಗೆ ಬರಲಾರದವರಿಗೆ ಮಾತುಗಳ ಮೂಲಕ ಈ ಎಲ್ಲ ವಿಚಾರಗಳನ್ನು ತಿಳಿಸಿ ಅವರ ಜೊತೆ ಚರ್ಚಿಸಿ. ಹವ್ಯಕ ಸಮಾಜದಲ್ಲೊಂದು ಸಂಚಲನೆ ಮೂಡಿ ಬರಲಿ. 

Please visit:www.havyakarindahavyakarigagi.blogspot.com

Thursday, November 21, 2013

About : shree Akhila Havyaka Mahasabha (R) Bangalore ..... ( part 2 )

About :   shree Akhila Havyaka Mahasabha (R) Bangalore ..... ( part 2 )


2013  ರ  ಅಖಿಲ ಹವ್ಯಕ ಮಹಾಸಭಾ ಚುನಾವಣೆ ಕುರಿತು. 



ಈ ಚುನಾವಣೆ ಅಧಿಕಾರಿಯಾಗಿ ಶ್ರೀ ಜಿ. ಕೆ . ಭಟ್ , ಜನಪ್ರಿಯ ವಕೀಲರು ಇವರು ಸಮರ್ಥ  ಮುಂದಾಳತ್ವ ನೀಡಿದ್ದು ತಮ್ಮೆಲ್ಲರ ಗಮನಕ್ಕೆ ಬಂದಿದೆ. ಮಾನ್ಯರು ಅಭಿನಂದನೀಯ ಕೆಲಸ ಮಾಡಿರುವದು ಪ್ರಸ್ತುತವಿದೆ.  



ಆದಾಗ್ಯೂ  ಚುನಾವಣೆಯಲ್ಲಿ  ನಮ್ಮ ಸಮಾಜಕ್ಕೆ ಶೋಭೆ ತರಲಾರದಂತಹ ಕೆಲಸಗಳು  ಆಡಳಿತ ಮಂಡಳಿಯಿಂದ ಘಟಿಸಿದ್ದು ನಮ್ಮ ಸಮಾಜದ ಮುಖಕ್ಕೆ ಬಳಿದ ಮಸಿಯಾಗಿದೆ ಎಂಬುದು ಶೋಚನೀಯ ವಿಚಾರ. 



೧. ಚುನಾವಣೆಗೆ ಎರಡು ದಿವಸಗಳಿರುವ ವರೆಗೂ ಹೊಂದಾಣಿಕೆಯಿಂದ ನಿರ್ದೇಶಕರನ್ನು ಆಯ್ಕೆ ಮಾಡೋಣ ಎಂದು ಚುನಾವಣಾ ಅಭ್ಯರ್ಥಿಗಳ ಸಭೆ ಕರೆದು , ಚುನಾವಣೆ  ವೆಚ್ಚ ಮಹಾಸಭೆಗೆ ಹೊರೆಯಾಗದಂತೆ ಕಾರ್ಯನಿರ್ವಹಿಸೋಣ ಎಂಬ statesman (ಧೀಮಂತ ವ್ಯಕ್ತಿ ) ಮುಖವನ್ನು ಸಾರ್ವಜನಿಕರಿಗೆ ತೋರುತ್ತ , ತಾವು ಗುರುತಿಸಿದ ತಾವು ಹೇಳಿದ ಎಲ್ಲ ಮಾತುಗಳನ್ನು ಅಂಗೀಕರಿಸುವ ವ್ಯಕ್ತಿಗಳನ್ನೇ ಆಯ್ದು ಗುಂಪನ್ನು ರಚಿಸಿ , ಚುನಾವಣೆ ನಡೆಸುವ ಎಲ್ಲಾ ಚಟುವಟಿಕೆಗಳನ್ನು ಗುಪ್ತವಾಗಿ ಕೈಗೊಂಡ ಢೋಂಗೀ ಮುಖಂಡರುಗಳಿಗೆ, ನಿಧಾನವಾಗಿ ಸಾಮಾನ್ಯ ಸದಸ್ಯರುಗಳು ತಮ್ಮ ಅಸ್ತ್ರವಾದ ಮತವನ್ನು ನೀಡದೇ, ಮಹಾಸಭೆಯನ್ನು ಅಜ್ಜನ ಆಸ್ತಿ ಮಾಡಿಕೊಂಡ ಮುಖಂಡರುಗಳಿಗೆ ಗೌರವದ ಬೀಳ್ಕೊಡುಗೆ ಕೊಡುವ ನಿರ್ಧಾರ ಮಾಡಬೇಕಾಗಿದೆ. 



೨. ಒಳಗೊಳಗೇ ಒಂದು ವರ್ಷದಿಂದ ಮಹಾಸಭೆಯ ಹಣವನ್ನು ಬೇರೆ ಬೇರೆ ಊರುಗಳಲ್ಲಿ ಕಾರ್ಯಕ್ರಮ ಸಂಘಟನೆಯ ಹೆಸರಿನಲ್ಲಿ ವೆಚ್ಚ ಮಾಡಿ , ತಮ್ಮ ಚಡ್ಡಿ ದೋಸ್ತರುಗಳನ್ನು, ಊರು - ಕೇರಿಯ ಮಿತ್ರರುಗಳನ್ನು, ಮೀಟಿಂಗ್ಸ್ ಗಳಿಗೆ ಬರಲಾರದವರನ್ನು ಗುರುತಿಸಿ ಸಂಪರ್ಕ ಬೆಳೆಸಿ , ಮಹಾಸಭೆಯ ಕಾನೂನು ( bye-laws ) ಗಳಿಗೆ ಅಡ್ಡಿಬರದಂತೆ , ಜೊತೆಗೆ ತಮ್ಮ ಅಧಿಕಾರಕ್ಕೆ ಧಕ್ಕೆ ಬರದಂತೆ ಮಹಾಸಭೆಯನ್ನೇ ಅಜ್ಜನ ಆಸ್ತಿಯಾಗಿಸುವಲ್ಲಿ ಕಾರ್ಯಪ್ರವ್ರತ್ತರಾಗಿ ನಮ್ಮ ಸಮಾಜಕ್ಕೆ ಘೋರ ಅವಮಾನ , ಅನ್ಯಾಯ ಎಸಗಿರುವದು ಬಹುಶ್ರುತ.  



೩. ಯಾವುದೇ ಸಂಘ , ಸಂಸ್ಥೆ ಯೊಂದು ಚುನಾವಣೆ ನಡೆಸುವ ಉದ್ದೇಶ  -  ಎಲ್ಲಾ ಸಾಮಾನ್ಯ ಮತದಾರ ಸದಸ್ಯರಿಗೂ ಚುನಾವಣಾ ಅಭ್ಯರ್ಥಿಗಳ ಬಗೆಗೆ ಸೂಕ್ತವಾದ ಮಾಹಿತಿ ದೊರೆತು ತಮಗೆ ಸರಿ ಎನಿಸಿದ, ಸಂಘಟನೆಯನ್ನು ಸೂಕ್ತವಾಗಿ ಮುನ್ನಡೆಸಬಲ್ಲ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ , ಸಂಘಟನೆ ಶ್ರೇಯೋಭಿವ್ರದ್ಧಿ ಪಡೆಯಲೆಂಬ  ಉದಾತ್ತ ಧ್ಯೇಯೋದ್ದೇಶಗಳಿಂದ ರಚಿತವಾದ ವ್ಯವಸ್ಥೆ - ಈ ವ್ಯವಸ್ಥೆಯನ್ನೇ ತಿರುಗು ಮುರುಗಾಗಿಸಿ ತಮ್ಮ ಕಪಿಮುಷ್ಟಿಯಲ್ಲಿ ಸಂಘಟನೆಯನ್ನು ಕಾಪಿಟ್ಟುಕೊಳ್ಳಬೇಕೆಂಬ ಹೀನ ವಿಚಾರಗಳೇ ಸಂಘಟನೆಗೆ ಮಾರಕ. ಚುನಾವಣೆ ನಡೆಯುವ ದಿನದ ವರೆಗೂ ಮಹಾಸಭೆಯಿಂದ ಅಭ್ಯರ್ಥಿಗಳ ಮಾಹಿತಿಯನ್ನು ಸಾಮಾನ್ಯ ಮತದಾರರಿಗೆ ನೀಡದೆ , ಕೇವಲ notice board ಗೆ ಅಂಟಿಸಿ , ಚುನಾವಣಾ ಸಮಯದಲ್ಲಿ print-out ಒಂದನ್ನು ಅಂಟಿಸಿ , ತಮ್ಮ ಗುಂಪಿನ ಅಭ್ಯರ್ಥಿಗಳಿಗಷ್ಟೇ ಕಾರ್ಯಾಲಯದ ಒಳಗೆ ಲಭ್ಯವಿದ್ದ ಮಾಹಿತಿಗಳನ್ನು ಕಾಲ ಕಾಲಕ್ಕೆ ಪೂರೈಸಿ , ಈ ದುರುದ್ದೇಶದ ಕಾರ್ಯಗಳಿಗೆ ತಮ್ಮ ಮುದ್ರೆಯನ್ನೊತ್ತುವ ಜನರೇ ಆಯ್ಕೆಯಾಗುವಂತೆ ವ್ಯೂಹ ರಚಿಸಿರುವದು ಖಂಡನೀಯ ವಿಚಾರ. 



೪.  ಚುನಾವಣೆ ನಡೆದ ದಿನ, ತಮಗೆ ಮತ ಚಲಾಯಿಸುವವರು ಎಂಬ ವಿಶ್ವಾಸ ಯಾರ್ಯಾರಲ್ಲಿದೆಯೋ , ಅವರನ್ನಷ್ಟೇ  ಒಂದೆಡೆ  ಸೇರಿಸಿ ಮಹಾಸಭೆಯ ಖರ್ಚಿನಲ್ಲಿ  ಟೀ , ಕಾಫಿ , ಉಪ್ಪಿಟ್ಟು, ಅವಲಕ್ಕಿ ಸಮಾರಾಧನೆ ಮಾಡಿದ್ದಂತೂ , ಮುಖಂಡರುಗಳ ಮುಖವಾಡ  ಧರಿಸಿದವರು ಯಾವ ಪ್ರಮಾಣದಲ್ಲಿ ಚರಂಡಿ ಬುದ್ಧಿಯನ್ನು ಉಪಯೋಗಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ ದಾಖಲಾಗಿ ಹೋಯಿತು. 



೫. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ , ಅಲ್ಲಲ್ಲಿ  " ಐದು ನೂರು ರೂಪಾಯಿ ಕೊಡೊ ಭಾವ, ಸಾವಿರ ರೂಪಾಯಿ ಕೊಡೊ ...  ಭಾವ /....  ಅಣ್ಣ  , ವೋಟ್ ಹಾಕಿ ಬಂದೆ "  ಎಂಬ ತಮಾಷೆಯ ಮಾತುಗಳ ಹಿಂದೆ ಮತ್ತು ಆಮೇಲೆ ಸಿಗಾನ, ಇಲ್ಲಿ ಬೇಡ ಎಂಬ ತಮಾಷೆಯ ಪ್ರತ್ಯುತ್ತರಗಳ ಹಿಂದೆ ಬೇರೇನೋ ಸತ್ಯ ಅಡಗಿದೆಯೋ ಎನಿಸುತ್ತದೆ. 



ಸಾಮಾನ್ಯ ಸದಸ್ಯ ಮತದಾರ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಅರವತ್ತೆರಡು ವರ್ಷಗಳ ಇತಿಹಾಸವಿರುವ ಸಂಘಟನೆಯೊಂದು ಮೈಕೊಡವಿ ಎದ್ದು ನಿಲ್ಲುವ ಸೂಕ್ತ ಕಾಲ ಇದಾಗಿದೆ. ನಿಮ್ಮ ಮಿತ್ರರಿಗೆಲ್ಲ ಈ ವಿಚಾರಗಳನ್ನು ತಲುಪಿಸಿ. ನಾಲ್ಕರಿಂದ ಐದು ಲಕ್ಷ ಜನಸಂಖ್ಯೆಯಿರುವ ಈ ಸಮಾಜ ಸಕಲ ಸಮೃದ್ಧಿ ಕಾಣುವಂತಾಗಲಿ. ಪ್ರತಿಯೊಬ್ಬ ಹವ್ಯಕ  ಮೂಲೆ ಮೂಲೆಗಳಿಂದಲು ತನ್ನ ಪ್ರತಿನಿಧಿ ಸಂಸ್ಥೆ ಇದೆಂದು ಅಭಿಮಾನದಿಂದ  ಹೇಳುವಂತಾಗಲಿ ಎಂಬ ಆಶಯಗಳೊಂದಿಗೆ,


ಹರಿಹರ . ಎಸ್ . ಭಟ್  , ಬೆಂಗಳೂರು . 
ಶ್ರೀ ಅಖಿಲ ಹವ್ಯಕ ಮಹಾಸಭಾ , ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

November 22 , 2013.

ಈ ವಿಚಾರಗಳನ್ನು ಪ್ರತಿಯೊಬ್ಬ ಹವ್ಯಕ ರಿಗೂ ತಲುಪಿಸುವ ವ್ಯವಸ್ಥೆಗೆ ನೀವು ಸಹಾಯ ಮಾಡಿ. ನಿಮ್ಮ ಮತ್ತು ನಿಮ್ಮ ಮಿತ್ರರ, ಸಂಬಂಧಿಗಳ e-mail id ಯನ್ನು havyakavaarte@gmail.com  ಎಂಬ id ಗೆ e-mail ಮಾಡಿ . ನಮ್ಮ ಸಂಪರ್ಕದಲ್ಲಿರಿ. 

ಈ ರೀತಿ e-mail ವ್ಯವಸ್ಥೆಗೆ ಬರಲಾರದವರಿಗೆ ಮಾತುಗಳ ಮೂಲಕ ಈ ಎಲ್ಲ ವಿಚಾರಗಳನ್ನು ತಿಳಿಸಿ ಅವರ ಜೊತೆ ಚರ್ಚಿಸಿ. ಹವ್ಯಕ ಸಮಾಜದಲ್ಲೊಂದು ಸಂಚಲನೆ ಮೂಡಿ ಬರಲಿ. 

Tuesday, November 19, 2013

About : Shree Akhila Havyaka Mahasabha ® Bangalore.

About  :   Shree Akhila Havyaka Mahasabha ® Bangalore.


ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಮಲ್ಲೇಶ್ವರದಲ್ಲಿರುವ ಕಟ್ಟಡವನ್ನು ಉರುಳಿಸಿ ನೆಲಸಮ ಮಾಡಿ ಇಟ್ಟಿದ್ದು ನಿಮ್ಮೆಲ್ಲರ ಗಮನದಲ್ಲಿದೆ ತಾನೇ?


ಕಟ್ಟಡದ ಪುನರ್ ನಿರ್ಮಾಣಕ್ಕೆ ನಿಮ್ಮೆಲ್ಲರಲ್ಲಿ ಹಣದ ಸಹಾಯ ಕೇಳಲು ಬರುತ್ತಿದ್ದಾರೆ, ಬರುವವರಿದ್ದಾರೆ ತಾನೇ? ಆಗ ಪದಾಧಿಕಾರಿಗಳಿಗೆ ಈ ಪ್ರಶ್ನೆಗಳನ್ನು ಕೇಳಲು ಮರೆಯದಿರಿ:


೧. ಸಾಕಷ್ಟು ಮೊತ್ತದ  ಆದಾಯವನ್ನು ತರುತ್ತಿರುವ ಕಟ್ಟಡವನ್ನು ಪುನರನಿರ್ಮಾಣಕ್ಕೆ ಬೇಕಾದ ಹಣ ಸಂಗ್ರಹವಾಗುವ ಮುನ್ನ ಕೆಡವುವಂತಹ ಅವಶ್ಯಕತೆ ಏನಿತ್ತು?  ವಸತಿಗೃಹದಲ್ಲಿರುವ ವಿಧ್ಯಾರ್ಥಿಗಳನ್ನು ಅವಧಿಗೆ ಮುನ್ನ ತೆರವುಗೊಳಿಸುವ ಅವಶ್ಯಕತೆ ಯಾಕಿತ್ತು?



೨.  ಕಟ್ಟಡ ನಕ್ಷೆ ತಯಾರಿ ಮಾಡಿ ಪೂರ್ವಾನುಮತಿ ಪಡೆಯುವ ಹಂತದಲ್ಲಿ ಎಡವಿದ್ದೇಕೆ?  ಅಲ್ಲಲ್ಲಿ ಕೇಳಿಬಂದಂತೆ ಒಮ್ಮೆ ಅರವತ್ತೈದು ಸಾವಿರ ರೂಪಾಯಿ ಖರ್ಚು ಮಾಡಿ ಪಡೆದ ಪೂರ್ವಾನುಮತಿಯನ್ನು ಪುನಃ ಪರಿಶೀಲನೆಗೊಳಪಡಿಸಿ ಮತ್ತೆ ನಲವತ್ತೈದು ಸಾವಿರ ರೂಪಾಯಿ ಖರ್ಚು ಮಾಡುವ ಪ್ರಸಂಗವನ್ನು ತಂದಿತ್ತವರು ಯಾರು ಎಂಬುದನ್ನೇಕೆ ಸಾರ್ವಜನಿಕ ಪಡಿಸಲಿಲ್ಲ?  ಈ ರೀತಿ ಅಜಾಗರೂಕತೆಯಿಂದ ಸಮಾಜ ಬಾಂಧವರ ಹಣ ವ್ಯರ್ಥವಾದರೂ ಆ ರೀತಿಯ ಜನರನ್ನೇ ಏಕೆ ಅವಲಂಬಿಸಿ ಜವಾಬ್ದಾರಿ ಸ್ಥಾನದಲ್ಲಿ ಮುಂದುವರಿಸುತ್ತೀರಿ? ಇಲ್ಲಿ ಪದಾಧಿಕಾರಿಗಳ ಸ್ವ ಹಿತ ಅಡಗಿರುವದಾದರೂ ಏನು


೩.  ೨೦೧೩ ರಲ್ಲಿ ನಡೆದ ಚುನಾವಣೆಗೆ ಮತ್ತು ವಾರ್ಷಿಕ ಮಹಾಸಭೆಗೆ ಪೋಲಿಸ್ ರಕ್ಷಣೆ ಪಡೆಯುವಂತೆ ಸಂದರ್ಭಗಳನ್ನು ತಂದಿತ್ತ ಪದಾಧಿಕಾರಿಗಳ ಆಡಳಿತ ರೀತಿ ಹೇಸಿಗೆ ಹುಟ್ಟಿಸುವಂತಿಲ್ಲವೇ? ಜಗತ್ತಿನಲ್ಲೆಲ್ಲ ಸುಭಗರು, ಸೌಮ್ಯ ಮನೋಭಾವದ ಜನಾಂಗ , ಸುಸಂಕೃತರು, ವಿದ್ಯಾವಂತರು, ಸಹೃದಯಿಗಳು , ಶಾಂತಿಪ್ರಿಯರು ಎಂದೆಲ್ಲ ಶತಶತಮಾನಗಳಿಂದ ಹೆಸರುವಾಸಿಯಾದ ಸಮಾಜಕ್ಕೆ ಕಳಂಕ ತಂದಿರಲ್ಲವೇ


೪. ಏನಕೇನ ಪ್ರಕಾರೇಣ ಖುರ್ಚಿಯನ್ನುಳಿಸಿಕೊಳ್ಳಬೇಕು , ಗುಪ್ತ ಗುಪ್ತವಾಗಿ ಬಚ್ಚಿಟ್ಟ ಮಾಹಿತಿಗಳು ಹೊರಬರಬಾರದು ಎಂದು ತಮ್ಮ ಕೇರಿಯ, ಊರಿನ , ಯಾವುದೇ ಮೀಟಿಂಗ ಗಳಿಗೆ ಬರದ, ಬಂದರೂ ಎಲ್ಲ ಸುಮ್ಮನೆ ಹ್ನೂ ಎನ್ನಬಹುದಾದವರನ್ನೇ ಆಯ್ದು ಆಯ್ದು ಅಧಿಕಾರ ಬಲದಿಂದ ಸ್ಥಾನವನ್ನುಳಿಸಿಕೊಳ್ಳುವ ಹಪಾ ಹಪಿ ಯಿಂದ ಒಟ್ಟಾರೆ ಸಮಾಜಕ್ಕೆ ಹಾನಿಯಾಗುತ್ತಿದೆಯಲ್ಲವೇ


೫.  ಯಾವುದೇ ಸಾಮಾನ್ಯ ಸದಸ್ಯನೊಬ್ಬ ನಿಮ್ಮ ಕಾರ್ಯ ರೀತಿ ಕುರಿತು ಆಸಕ್ತಿ ವಹಿಸಿ ವಿಚಾರಿಸಿದರೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆಯನ್ನೇ ಹೊಂದಿಲ್ಲ. ಕೇವಲ ಕಾನೂನಿಗೋಸ್ಕರವಾಗಿ ಕಣ್ಣುಮುಚ್ಚಾಲೆಯ ಲೆಕ್ಕ  ಪತ್ರಗಳು , ಆಂತರಿಕ ವರದಿ , ವಾರ್ಷಿಕ ಸಭೆ ಎಂದು ಅಧಿಕಾರದ ದರ್ಪವನ್ನು ತೋರ್ಪಡಿಸುತ್ತೀರಿ. ಮಾತನಾಡುವವನ ಧ್ವನಿ  ಅಡಗಿಸುವ ತಂತ್ರಗಳನ್ನೆಲ್ಲ ಕಾರ್ಯಗತ ಮಾಡಿದ್ದೀರಿ ಎಂದು ಸ್ವಾಭಾವಿಕವಾಗಿ ತೋರ್ಪಡುವದು. ನಮ್ಮ ಸಮಾಜಕ್ಕೆ ಇವೆಲ್ಲ ಶೋಭೆ ತರಬಲ್ಲುದೇ ?


೬. ಒಟ್ಟಾರೆ ದೇಶದ ಜನಸಂಖ್ಯೆಯನ್ನು ಗಮನಿಸಿದರೆ ನಮ್ಮ ಸಮಾಜ ಕಡಿಮೆ ಜನ  ಸಂಖ್ಯೆಯನ್ನು ಹೊಂದಿದೆ. ಈ ಸಮಾಜದಲ್ಲೇ ಹತ್ತಾರು ಚುರುಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿವೆ. ಅದೇ ರೀತಿ ವಿವಿಧ ರೀತಿಯ ಶಿಕ್ಷಣ ಪಡೆದ , ವಿವಿಧ ರೀತಿಯ ಉದ್ಯೋಗ ಕೈಗೊಂಡಿರುವ ಸಮಾಜಬಾಂಧವರನ್ನು ಒಗ್ಗೂಡಿಸುವ ಯಾವ ಕಾರ್ಯಗಳೂ ಈ ಸಂಸ್ಥೆಯಿಂದ ತೋರಿಬರುತ್ತಿಲ್ಲ.  ಶಾಲೆಯೊಂದರ ಚಟುವಟಿಕೆಗಳಂತೆ ಆಟೋಟ, ವರ್ಷದಲ್ಲಿ ಹತ್ತಾರು ವಿವಾಹ ಮಾಹಿತಿ ಬೈಠಕ್ಕಗಳು , ವರ್ಷಕ್ಕೊಮ್ಮೆ ಪುಸ್ತಕಗಳನ್ನು ಕೊಳ್ಳಲೂ  ಸಾಲದಾದಂತ ವಿಧ್ಯಾರ್ಥಿ ವೇತನಗಳು ಇವುಗಳನ್ನು ನೆಚ್ಚಿ ಚಟುವಟಿಕೆಗಳನ್ನು ಕೈಗೊಳ್ಳುವ ನಿಮ್ಮ ಮುಂದಾಳತ್ವವನ್ನು ಏಕೆ ಮತ್ತು ಹೇಗೆ ಮೆಚ್ಚಬೇಕು ? ಹಣಕಾಸು ವ್ಯವಹಾರದ ಸೂಕ್ತ ರೀತಿಯ ಪಾರದರ್ಶಕತೆ , ಎಲ್ಲ ರೀತಿಯ ಔದ್ಯೋಗಿಕ  ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಮಾಜ ಬಾಂಧವರ ಪ್ರತಿನಿಧಿತ್ವ ಆಡಳಿತ ಮಂಡಳಿಯಲ್ಲಿ ಇಲ್ಲದಿರುವಿಕೆ , ಹತ್ತಾರು ವರ್ಷಗಳಿಂದ ಅದೇ ನಿರ್ದೇಶಕರು ಮುಂದುವರಿದಿರುವಿಕೆ ಇತ್ಯಾದಿ ಅಂಷಗಳನ್ನೆಲ್ಲ ಗಣನೆಗೆ ತೆಗೆದುಕೊಂಡಾಗ ಪ್ರಸಕ್ತ ಮುಂದಾಳತ್ವದಲ್ಲಿ ಸಮಾಜ ಬಾಂಧವರಿಗೆಲ್ಲ  ವಿಶ್ವಾಸದ  ಕೊರತೆ ಸಹಜವಲ್ಲವೇ ? ಇಲ್ಲದಿದ್ದರೆ ಅರವತ್ತೆರಡು   ವರ್ಷಗಳ ಇತಿಹಾಸವಿರುವ  ಈ ಸಂಸ್ತೆ ಪ್ರವರ್ಧಮಾನಕ್ಕೆ ಬರದಿರುತ್ತಿತ್ತೇ ?


೭. ಸಮಾಜದಲ್ಲಿ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರು , ಈ ರೀತಿ ಜನಗಳಿಗೆ ಸಾಮಾಜಿಕ ಸಂಸ್ಥೆಗಳಿಂದ ಸೂಕ್ತ ಸಹಾಯ ಸೌಲಭ್ಯಗಳ ಅವಶ್ಯಕತೆಯಿರುತ್ತದೆ. ಈಗ ಹಾಲಿ ನೀವು ನಡೆಸುತ್ತಿರುವ ಯಾವ ವಿಧ್ಯಾರ್ಥಿನಿಲಯಗಳಲ್ಲಿ ಎಷ್ಟು ಅಸಹಾಯಕ ಬಡ ಮಕ್ಕಳಿಗೆ ಉಚಿತ ಸೌಲಭ್ಯ  ನೀಡಿದ್ದೀರಿ? ಸಮಾಜ ಬಾಂಧವರಿಂದ ಸಂಗ್ರಹಿಸಿದ ಹಣದಿಂದ  ವಿಧ್ಯಾರ್ಥಿನಿಲಯಗಳನ್ನು ಕಟ್ಟಿ ಉಳ್ಳವರ ಮಕ್ಕಳಿಗೆ ಸೌಲಭ್ಯ  ಒದಗಿಸಿ ಆದಾಯದ ಮೂಲ ವರ್ಧಿಸಬೇಕೆಂಬ ನಿಮ್ಮ ಧೋರಣೆಯನ್ನು ನಾವ್ಯಾಕೆ ಅನುಮೋದಿಸಿ ಹಣಕಾಸಿನ ದೇಣಿಗೆ ನೀಡಬೇಕು?


  ಈ ರೀತಿ ಹತ್ತಾರು ಪ್ರಶ್ನೆಗಳನ್ನು ಕೇಳುವ ಅಧಿಕಾರ , ಜವಾಬ್ದಾರಿ ಎಲ್ಲ ಸಾಮಾನ್ಯ ಸದಸ್ಯರಿಗೆ ಇರುತ್ತದೆ. ಅದೇ ರೀತಿ ಸಾಮಾನ್ಯ ಸದಸ್ಯರು ಜಾಗ್ರತರಾಗಿದ್ದಲ್ಲಿ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳುವ ಅರಿವು ಉಂಟಾಗುತ್ತದೆ. ಸಮಾಜ ಅಭಿವೃದ್ಧಿ ಕಾಣುತ್ತದೆ. ಅಭಿವೃದ್ಧಿಯಾದ ಸಮಾಜ ಸುಖ , ನೆಮ್ಮದಿಗಳಿಂದ  ಮಿನುಗುತ್ತದೆ. ತಪ್ಪಿದಲ್ಲಿ ಪದಾಧಿಕಾರಿಗಳಷ್ಟೇ ಮಿನುಗುತ್ತಾರೆ ಮತ್ತು ಒಮ್ಮೆ ಮಿನುಗುವ ಬೆಳಕಿನ ಅಭಿಲಾಷೆ ಪಡೆದರೆ ಇನ್ಯಾರೂ ಹತ್ತಿರ ಸುಳಿಯದಂತೆ ವ್ಯೂಹ ರಚಿಸುತ್ತಿರುತ್ತಾರೆ. 


ಸದಸ್ಯರಾಗಿದ್ದವರ ಮನೆಗಳಿಗೆಲ್ಲ ಬಂದ ಹವ್ಯಕ ಪತ್ರಿಕೆ ಸಂಚಿಕೆಯಲ್ಲಿರುವ ಪದಾಧಿಕಾರಿಗಳ ಗುಣ ವಿಶೇಷತೆಗಳನ್ನು ಕಂಡುಕೊಳ್ಳಿ . ನಿಮಗೆಲ್ಲ ನನಗಿಂತ ಹೆಚ್ಚಿನ ಅರಿವು ಇದೆ. ನಿಮ್ಮ ಭೆಟ್ಟಿಗೆ ಪದಾಧಿಕಾರಿಗಳು ಬಂದಾಗ ನಮ್ಮೂರಿನವ, ನಮ್ಮ ಕೇರಿಯವ, ನಮ್ಮ ಮಗ, ನಮ್ಮ ಬಾಂಧವ ಎಂಬುದನ್ನು ನೆನಪಿಸಿಕೊಂಡು ಟೀ , ಕಾಫಿ ಯೊಂದಿಗೆ ಸತ್ಕರಿಸಿ. ದೇಣಿಗೆಯ ಆಶ್ವಾಸನೆ ನೀಡುವ ಮುನ್ನ ಈ  ಮೇಲೆ ಹೇಳಿದ ಎಲ್ಲ ವಿಚಾರಗಳನ್ನು ಅವರೊಂದಿಗೆ ಕೂಲಂಕುಶವಾಗಿ ಪ್ರಶ್ನಿಸಿ , ಸಮಾಜದಲ್ಲಿ ಸಂಘಟನೆಗೆ ಸ್ಪಂದಿಸಿ ಎಂಬ ಅರಿಕೆ. 


ನಮ್ಮ ಸಮಾಜ ಬಾಂಧವರ ಸಂಖ್ಯೆ ನಾಲ್ಕರಿಂದ ಐದು ಲಕ್ಷ ಎಂದು ಒಂದು ಅಂಬೋಣ. ಅಂದರೆ ಸಾಮಾನ್ಯವಾಗಿ ನಲವತ್ತೈದರಿಂದ ಅರವತ್ತು ಸಾವಿರ ಕುಟುಂಬಗಳಿರಬಹುದು. ಈ ಶ್ರೀ ಅಖಿಲ ಹವ್ಯಕ ಮಹಾಸಭಾ ದ ಸದಸ್ಯ ಸಂಖ್ಯೆ  ಕೇವಲ ಹದಿನಾರು , ಹದಿನೇಳು ಸಾವಿರಗಳು ಮಾತ್ರ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ. ಹೆಚ್ಚು ಹೆಚ್ಚು ಸೂಕ್ತವಾದ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಬೆಳೆಸಿಕೊಂಡು , ಜವಾಬ್ದಾರಿಯುತ ಪದಾಧಿಕಾರಿಗಳನ್ನು ಸಂಘಟನೆಗೆ ನೀಡಿ ಎಂಬ ಬಿನ್ನಹ. 


ಈ ಅಹವಾಲನ್ನು ಎಲ್ಲ ಹವ್ಯಕರಿಗೆ, ಎಲ್ಲ ಹವ್ಯಕ ಕುಟುಂಬಗಳಿಗೆ ತಲುಪಿಸುವ  ಜವಾಬ್ದಾರಿ  ತಮ್ಮದೆಲ್ಲರದ್ದಾಗಿದೆ. ಪ್ರಯತ್ನಪೂರ್ವಕವಾಗಿ ಈ ವಿಚಾರಗಳನ್ನು ಹೆಚ್ಚು  ಹೆಚ್ಚು ಪ್ರಚಾರ ಮಾಡಿ, ಪದಾಧಿಕಾರಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಸಮಾಜ ಬಾಂಧವರಲ್ಲೆಲ್ಲಾ ಬೆಳೆಸಿ ಎಂಬ ಅರಿಕೆಯೊಂದಿಗೆ,


ಹರಿಹರ . ಎಸ್.  ಭಟ್ , ಬೆಂಗಳೂರು. 
ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

ನವೆಂಬರ್ ೨೦, ೨೦೧೩.