Thursday, November 21, 2013

About : shree Akhila Havyaka Mahasabha (R) Bangalore ..... ( part 2 )

About :   shree Akhila Havyaka Mahasabha (R) Bangalore ..... ( part 2 )


2013  ರ  ಅಖಿಲ ಹವ್ಯಕ ಮಹಾಸಭಾ ಚುನಾವಣೆ ಕುರಿತು. 



ಈ ಚುನಾವಣೆ ಅಧಿಕಾರಿಯಾಗಿ ಶ್ರೀ ಜಿ. ಕೆ . ಭಟ್ , ಜನಪ್ರಿಯ ವಕೀಲರು ಇವರು ಸಮರ್ಥ  ಮುಂದಾಳತ್ವ ನೀಡಿದ್ದು ತಮ್ಮೆಲ್ಲರ ಗಮನಕ್ಕೆ ಬಂದಿದೆ. ಮಾನ್ಯರು ಅಭಿನಂದನೀಯ ಕೆಲಸ ಮಾಡಿರುವದು ಪ್ರಸ್ತುತವಿದೆ.  



ಆದಾಗ್ಯೂ  ಚುನಾವಣೆಯಲ್ಲಿ  ನಮ್ಮ ಸಮಾಜಕ್ಕೆ ಶೋಭೆ ತರಲಾರದಂತಹ ಕೆಲಸಗಳು  ಆಡಳಿತ ಮಂಡಳಿಯಿಂದ ಘಟಿಸಿದ್ದು ನಮ್ಮ ಸಮಾಜದ ಮುಖಕ್ಕೆ ಬಳಿದ ಮಸಿಯಾಗಿದೆ ಎಂಬುದು ಶೋಚನೀಯ ವಿಚಾರ. 



೧. ಚುನಾವಣೆಗೆ ಎರಡು ದಿವಸಗಳಿರುವ ವರೆಗೂ ಹೊಂದಾಣಿಕೆಯಿಂದ ನಿರ್ದೇಶಕರನ್ನು ಆಯ್ಕೆ ಮಾಡೋಣ ಎಂದು ಚುನಾವಣಾ ಅಭ್ಯರ್ಥಿಗಳ ಸಭೆ ಕರೆದು , ಚುನಾವಣೆ  ವೆಚ್ಚ ಮಹಾಸಭೆಗೆ ಹೊರೆಯಾಗದಂತೆ ಕಾರ್ಯನಿರ್ವಹಿಸೋಣ ಎಂಬ statesman (ಧೀಮಂತ ವ್ಯಕ್ತಿ ) ಮುಖವನ್ನು ಸಾರ್ವಜನಿಕರಿಗೆ ತೋರುತ್ತ , ತಾವು ಗುರುತಿಸಿದ ತಾವು ಹೇಳಿದ ಎಲ್ಲ ಮಾತುಗಳನ್ನು ಅಂಗೀಕರಿಸುವ ವ್ಯಕ್ತಿಗಳನ್ನೇ ಆಯ್ದು ಗುಂಪನ್ನು ರಚಿಸಿ , ಚುನಾವಣೆ ನಡೆಸುವ ಎಲ್ಲಾ ಚಟುವಟಿಕೆಗಳನ್ನು ಗುಪ್ತವಾಗಿ ಕೈಗೊಂಡ ಢೋಂಗೀ ಮುಖಂಡರುಗಳಿಗೆ, ನಿಧಾನವಾಗಿ ಸಾಮಾನ್ಯ ಸದಸ್ಯರುಗಳು ತಮ್ಮ ಅಸ್ತ್ರವಾದ ಮತವನ್ನು ನೀಡದೇ, ಮಹಾಸಭೆಯನ್ನು ಅಜ್ಜನ ಆಸ್ತಿ ಮಾಡಿಕೊಂಡ ಮುಖಂಡರುಗಳಿಗೆ ಗೌರವದ ಬೀಳ್ಕೊಡುಗೆ ಕೊಡುವ ನಿರ್ಧಾರ ಮಾಡಬೇಕಾಗಿದೆ. 



೨. ಒಳಗೊಳಗೇ ಒಂದು ವರ್ಷದಿಂದ ಮಹಾಸಭೆಯ ಹಣವನ್ನು ಬೇರೆ ಬೇರೆ ಊರುಗಳಲ್ಲಿ ಕಾರ್ಯಕ್ರಮ ಸಂಘಟನೆಯ ಹೆಸರಿನಲ್ಲಿ ವೆಚ್ಚ ಮಾಡಿ , ತಮ್ಮ ಚಡ್ಡಿ ದೋಸ್ತರುಗಳನ್ನು, ಊರು - ಕೇರಿಯ ಮಿತ್ರರುಗಳನ್ನು, ಮೀಟಿಂಗ್ಸ್ ಗಳಿಗೆ ಬರಲಾರದವರನ್ನು ಗುರುತಿಸಿ ಸಂಪರ್ಕ ಬೆಳೆಸಿ , ಮಹಾಸಭೆಯ ಕಾನೂನು ( bye-laws ) ಗಳಿಗೆ ಅಡ್ಡಿಬರದಂತೆ , ಜೊತೆಗೆ ತಮ್ಮ ಅಧಿಕಾರಕ್ಕೆ ಧಕ್ಕೆ ಬರದಂತೆ ಮಹಾಸಭೆಯನ್ನೇ ಅಜ್ಜನ ಆಸ್ತಿಯಾಗಿಸುವಲ್ಲಿ ಕಾರ್ಯಪ್ರವ್ರತ್ತರಾಗಿ ನಮ್ಮ ಸಮಾಜಕ್ಕೆ ಘೋರ ಅವಮಾನ , ಅನ್ಯಾಯ ಎಸಗಿರುವದು ಬಹುಶ್ರುತ.  



೩. ಯಾವುದೇ ಸಂಘ , ಸಂಸ್ಥೆ ಯೊಂದು ಚುನಾವಣೆ ನಡೆಸುವ ಉದ್ದೇಶ  -  ಎಲ್ಲಾ ಸಾಮಾನ್ಯ ಮತದಾರ ಸದಸ್ಯರಿಗೂ ಚುನಾವಣಾ ಅಭ್ಯರ್ಥಿಗಳ ಬಗೆಗೆ ಸೂಕ್ತವಾದ ಮಾಹಿತಿ ದೊರೆತು ತಮಗೆ ಸರಿ ಎನಿಸಿದ, ಸಂಘಟನೆಯನ್ನು ಸೂಕ್ತವಾಗಿ ಮುನ್ನಡೆಸಬಲ್ಲ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ , ಸಂಘಟನೆ ಶ್ರೇಯೋಭಿವ್ರದ್ಧಿ ಪಡೆಯಲೆಂಬ  ಉದಾತ್ತ ಧ್ಯೇಯೋದ್ದೇಶಗಳಿಂದ ರಚಿತವಾದ ವ್ಯವಸ್ಥೆ - ಈ ವ್ಯವಸ್ಥೆಯನ್ನೇ ತಿರುಗು ಮುರುಗಾಗಿಸಿ ತಮ್ಮ ಕಪಿಮುಷ್ಟಿಯಲ್ಲಿ ಸಂಘಟನೆಯನ್ನು ಕಾಪಿಟ್ಟುಕೊಳ್ಳಬೇಕೆಂಬ ಹೀನ ವಿಚಾರಗಳೇ ಸಂಘಟನೆಗೆ ಮಾರಕ. ಚುನಾವಣೆ ನಡೆಯುವ ದಿನದ ವರೆಗೂ ಮಹಾಸಭೆಯಿಂದ ಅಭ್ಯರ್ಥಿಗಳ ಮಾಹಿತಿಯನ್ನು ಸಾಮಾನ್ಯ ಮತದಾರರಿಗೆ ನೀಡದೆ , ಕೇವಲ notice board ಗೆ ಅಂಟಿಸಿ , ಚುನಾವಣಾ ಸಮಯದಲ್ಲಿ print-out ಒಂದನ್ನು ಅಂಟಿಸಿ , ತಮ್ಮ ಗುಂಪಿನ ಅಭ್ಯರ್ಥಿಗಳಿಗಷ್ಟೇ ಕಾರ್ಯಾಲಯದ ಒಳಗೆ ಲಭ್ಯವಿದ್ದ ಮಾಹಿತಿಗಳನ್ನು ಕಾಲ ಕಾಲಕ್ಕೆ ಪೂರೈಸಿ , ಈ ದುರುದ್ದೇಶದ ಕಾರ್ಯಗಳಿಗೆ ತಮ್ಮ ಮುದ್ರೆಯನ್ನೊತ್ತುವ ಜನರೇ ಆಯ್ಕೆಯಾಗುವಂತೆ ವ್ಯೂಹ ರಚಿಸಿರುವದು ಖಂಡನೀಯ ವಿಚಾರ. 



೪.  ಚುನಾವಣೆ ನಡೆದ ದಿನ, ತಮಗೆ ಮತ ಚಲಾಯಿಸುವವರು ಎಂಬ ವಿಶ್ವಾಸ ಯಾರ್ಯಾರಲ್ಲಿದೆಯೋ , ಅವರನ್ನಷ್ಟೇ  ಒಂದೆಡೆ  ಸೇರಿಸಿ ಮಹಾಸಭೆಯ ಖರ್ಚಿನಲ್ಲಿ  ಟೀ , ಕಾಫಿ , ಉಪ್ಪಿಟ್ಟು, ಅವಲಕ್ಕಿ ಸಮಾರಾಧನೆ ಮಾಡಿದ್ದಂತೂ , ಮುಖಂಡರುಗಳ ಮುಖವಾಡ  ಧರಿಸಿದವರು ಯಾವ ಪ್ರಮಾಣದಲ್ಲಿ ಚರಂಡಿ ಬುದ್ಧಿಯನ್ನು ಉಪಯೋಗಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ ದಾಖಲಾಗಿ ಹೋಯಿತು. 



೫. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ , ಅಲ್ಲಲ್ಲಿ  " ಐದು ನೂರು ರೂಪಾಯಿ ಕೊಡೊ ಭಾವ, ಸಾವಿರ ರೂಪಾಯಿ ಕೊಡೊ ...  ಭಾವ /....  ಅಣ್ಣ  , ವೋಟ್ ಹಾಕಿ ಬಂದೆ "  ಎಂಬ ತಮಾಷೆಯ ಮಾತುಗಳ ಹಿಂದೆ ಮತ್ತು ಆಮೇಲೆ ಸಿಗಾನ, ಇಲ್ಲಿ ಬೇಡ ಎಂಬ ತಮಾಷೆಯ ಪ್ರತ್ಯುತ್ತರಗಳ ಹಿಂದೆ ಬೇರೇನೋ ಸತ್ಯ ಅಡಗಿದೆಯೋ ಎನಿಸುತ್ತದೆ. 



ಸಾಮಾನ್ಯ ಸದಸ್ಯ ಮತದಾರ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಅರವತ್ತೆರಡು ವರ್ಷಗಳ ಇತಿಹಾಸವಿರುವ ಸಂಘಟನೆಯೊಂದು ಮೈಕೊಡವಿ ಎದ್ದು ನಿಲ್ಲುವ ಸೂಕ್ತ ಕಾಲ ಇದಾಗಿದೆ. ನಿಮ್ಮ ಮಿತ್ರರಿಗೆಲ್ಲ ಈ ವಿಚಾರಗಳನ್ನು ತಲುಪಿಸಿ. ನಾಲ್ಕರಿಂದ ಐದು ಲಕ್ಷ ಜನಸಂಖ್ಯೆಯಿರುವ ಈ ಸಮಾಜ ಸಕಲ ಸಮೃದ್ಧಿ ಕಾಣುವಂತಾಗಲಿ. ಪ್ರತಿಯೊಬ್ಬ ಹವ್ಯಕ  ಮೂಲೆ ಮೂಲೆಗಳಿಂದಲು ತನ್ನ ಪ್ರತಿನಿಧಿ ಸಂಸ್ಥೆ ಇದೆಂದು ಅಭಿಮಾನದಿಂದ  ಹೇಳುವಂತಾಗಲಿ ಎಂಬ ಆಶಯಗಳೊಂದಿಗೆ,


ಹರಿಹರ . ಎಸ್ . ಭಟ್  , ಬೆಂಗಳೂರು . 
ಶ್ರೀ ಅಖಿಲ ಹವ್ಯಕ ಮಹಾಸಭಾ , ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

November 22 , 2013.

ಈ ವಿಚಾರಗಳನ್ನು ಪ್ರತಿಯೊಬ್ಬ ಹವ್ಯಕ ರಿಗೂ ತಲುಪಿಸುವ ವ್ಯವಸ್ಥೆಗೆ ನೀವು ಸಹಾಯ ಮಾಡಿ. ನಿಮ್ಮ ಮತ್ತು ನಿಮ್ಮ ಮಿತ್ರರ, ಸಂಬಂಧಿಗಳ e-mail id ಯನ್ನು havyakavaarte@gmail.com  ಎಂಬ id ಗೆ e-mail ಮಾಡಿ . ನಮ್ಮ ಸಂಪರ್ಕದಲ್ಲಿರಿ. 

ಈ ರೀತಿ e-mail ವ್ಯವಸ್ಥೆಗೆ ಬರಲಾರದವರಿಗೆ ಮಾತುಗಳ ಮೂಲಕ ಈ ಎಲ್ಲ ವಿಚಾರಗಳನ್ನು ತಿಳಿಸಿ ಅವರ ಜೊತೆ ಚರ್ಚಿಸಿ. ಹವ್ಯಕ ಸಮಾಜದಲ್ಲೊಂದು ಸಂಚಲನೆ ಮೂಡಿ ಬರಲಿ. 

No comments:

Post a Comment