Friday, October 11, 2013

ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು ಮೇನೇಜರ್ ಟಿ. ಜಿ . ಹೆಗಡೆ

........ ಜೈ ಹೋ , ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು ಮೇನೇಜರ್ ಟಿ. ಜಿ . ಹೆಗಡೆ ........... 


ಸೆಪ್ಟೆಂಬರ್ ೨೦೧೩ ರ ಹವ್ಯಕ ಮಾಸಪತ್ರಿಕೆ ಓದುತ್ತಿದ್ದಾಗ ಆನಂದ ಭಾಷ್ಪಗಳೆರಡು ಉದುರಿದವು. ಪುಟ ಹದಿಮೂರರಲ್ಲಿ ಬರೆದ " ಮಹಾಸಭೆಯ ವ್ಯವಸ್ತಾಪಕರಾದ ಶ್ರೀ ಟಿ. ಜಿ. ಹೆಗಡೆಯವರು ಕಳೆದ ಒಂದು ವರ್ಷದಿಂದ ಯಾವುದೇ ವೇತನವನ್ನಾಗಲೀ, ಭತ್ಯೆಯನ್ನಾಗಲಿ ಸ್ವೀಕರಿಸದೆ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. " ಸಾಲುಗಳನ್ನು ಓದಿದಾಗ , ಶ್ರೀ ಹೆಗಡೆಯವರು ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆಗೆ ಸಾಲುಗಳು ಸಾಲಲಿಲ್ಲ ಎನಿಸಿತು. ಅದಕ್ಕೇ ಅಭಿನಂದನೆ ಜೊತೆ ನಾಲ್ಕಾರು ಸಾಲುಗಳು ಹೀಗೆ.


ಹೆಗಡೆಯವ್ರೇನು ಆಗರ್ಭ ಶ್ರೀಮಂತರ ಮನೆತನದಿಂದ ಬಂದವರಲ್ಲ. ಆದರೆ ಸಮಯ ಕೂಡಿಬಂದಾಗ, ಪರಿಶ್ರಮ ಫಲ ನೀಡಿದಾಗ, ದೇವರು ಸಂಪ್ರೀತನಾದಾಗ ಮನುಷ್ಯ ತನ್ನ ಸಮಾಜಕ್ಕೇನು ತಿರುಗಿ ನೀಡಬಲ್ಲನು ಎನ್ನಲು ಹೆಗಡೆಯವರ ನಡೆ ಆದರ್ಶಪ್ರಾಯ . ಕೈ ತುಂಬ ಸಂಬಳ ತರುವ ಮಕ್ಕಳಿಬ್ಬರನ್ನು , ಸೊಸೆಯಂದಿರನ್ನು ಪಡೆದಿರುವ ಹೆಗಡೆಯವರು ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಮಹಾಸಭೆಯ ವ್ಯವಸ್ತಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾಸಭೆ ಎಂದೊಡನೆ ಮೊದಲ ಸಂಪರ್ಕಕ್ಕೆ ಸಿಗುವದೇ ಹೆಗಡೆಯವರು. ಸದಾ ಹಸನ್ಮುಖಿ, ಸೇವಾ ಮನೋಭಾವವನ್ನೇ ಮೈಗೂಡಿಸಿಕೊಂಡಿರುವ ಹೆಗಡೆಯವರು ಪ್ರತಿಯೊಬ್ಬರನ್ನು ಮನೆ ಮಂದಿಯಂತೆ ಮಾತನಾಡಿಸುವ ಪರಿಯೇ ಅವರನ್ನು ಜನಾನುರಾಗಿಯಾಗಿಸಿದೆ. ಮಹಾಸಭೆ ಎಂದೊಡನೆ ಎಲ್ಲರ ಮನಸ್ಸಿನಲ್ಲೂ ಒಮ್ಮೆ, ಟಿ. ಜಿ. ಹೆಗಡೆಯವರ ಮುಖವೇ ಎದುರು ಕಾಣಿಸುವದು. ಆ ರೀತಿ ಆತ್ಮೀಯವಾಗಿರುವ ಅವರ ನಡೆ ನುಡಿಯೇ ಅವರಿಗೆ ಶ್ರೀ ರಕ್ಷೆಯಾಗಿ ಬಂದಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.



ತನಗೆ ಜೀವನದಲ್ಲಿ ಅನುಕೂಲಗಳೊದಗಿ ಬಂದಾಗ, ತಾನು ಸಂಬಳ ಪಡೆದು ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲಿ , ಸಂಬಳ ಪಡೆಯದೆ , ಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ತನ್ನಿಂದ ಈ ರೀತಿ ಸೇವೆಯೊದಗಲಿ ಎಂಬ ವಿಶಾಲ ಹೃದಯದ ನಿರ್ಣಯ ಕೈಗೊಳ್ಳುವದು ಸುಲಭದ ಮಾತಲ್ಲ. ಈ ನಿರ್ಣಯಕ್ಕೆ ಸಹಮತ ವ್ಯಕ್ತ ಪಡಿಸಿದ ಅವರ ಶೀಮತಿ ಲಲಿತಕ್ಕ ಮತ್ತು ಮಕ್ಕಳು ಹಾಗೂ ಸೊಸೆಯರು ಅಭಿನಂದನೀಯರು.


ನಮ್ಮ ಸಮಾಜದಲ್ಲಿ ಈ ರೀತಿಯ ಸೇವಾಮನೋಭಾವದ ಸರಳ ಸಜ್ಜನರ ಸಂಖ್ಯೆ, ಸಮೂಹ ಹೆಚ್ಚು ಹೆಚ್ಚು ಬೆಳೆಯಲಿ ಎಂದು ಹಾರೈಸೋಣ.

No comments:

Post a Comment